ಸಂಸದರು ಹೊಸ ಸಂಸತ್ ಕಟ್ಟಡಕ್ಕೆ ತೆರಳಿದಾಗ “ಹಿಂದಿನ ಎಲ್ಲಾ ಕಹಿಯನ್ನು ಮರೆತು”, ಸಂಸದೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು ಮತ್ತು “ಈ ಹೊಸ ಸಂಸತ್ ಕಟ್ಟಡದಲ್ಲಿ ನಮ್ಮ ನಡವಳಿಕೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸ್ಫೂರ್ತಿಯಾಗಿರಬೇಕು” ಎಂದು ಅವರು ಹೇಳಿದ್ದರು. ಹೊಸ ಆರಂಭಕ್ಕೆ ಸೂಕ್ತವಾಗಿ, ಮೋದಿಯವರ ಸರ್ಕಾರವು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯನ್ನು ಮಂಡಿಸಿತು. ಈ ಪ್ರಸ್ತಾಪವು ಸರ್ವಾನುಮತದ ಅಂಗೀಕಾರ ಪಡೆದಿದೆ. ಕೆಲವು ಪಕ್ಷಗಳು ಅದರ ಅನುಷ್ಠಾನ ಎಂದಾಗುವುದು ಎಂಬುದರ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರೆ, ಇನ್ನು ಕೆಲವು ಪಕ್ಷಗಳು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿವೆ. ಆದರೆ ಈ ಏಕತೆಯ ಪ್ರದರ್ಶನವು ಸಂಸತ್ತಿನ ಘನತೆಯನ್ನು ಅಲ್ಲಗಳೆಯುವ ದುರದೃಷ್ಟಕರ ಘಟನೆಗಳಿಂದ ಶೀಘ್ರವೇ ಮುಸುಕಾಯಿತು. ಅಷ್ಟೇನೂ ರಾಜಕೀಯ ಜಿದ್ದಾಜಿದ್ದಿನ ವಿಷಯವೂ ಅಲ್ಲದ ಚಂದ್ರಯಾನದ ಯಶಸ್ಸಿನ ಬಗ್ಗೆ ಚರ್ಚೆಯಾಗುತ್ತಿರುವಾಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರೊಬ್ಬರು ಮುಸ್ಲಿಂ ಸಮುದಾಯದ ಸಹ ಸಂಸದರ ಮೇಲೆ ವಿಷಕಾರಿ ಕೋಮು ಬೈಗುಳಗಳನ್ನು ಪ್ರಯೋಗಿಸಿದರು. ಕೆಲವು ಹಿರಿಯ ಬಿಜೆಪಿ ಸದಸ್ಯರು ಇದನ್ನು ನೋಡಿ ನಗುತ್ತಿರುವುದೂ ಕಂಡುಬಂದಿತು. ರಾಜ್ಯಸಭೆಯಲ್ಲಿ, ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿದ್ದ ಕೆಲವರು ಸರ್ಕಾರವನ್ನು ಬೆಂಬಲಿಸಿ ರಾಜಕೀಯ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದೆ. ಇದೂ ಅನುಚಿತ ವರ್ತನೆಯಾಗಿದೆ.
ಬಿಜೆಪಿ ಸಂಸದರ ಕಾರ್ಯವೈಖರಿ ಖಂಡನೀಯ, ಆದರೆ ಈ ಘಟನೆಯ ನಂತರ ಪಕ್ಷದ ಒಟ್ಟಾರೆ ಧೋರಣೆ ಗಾಯದ ಮೇಲೆ ಬರೆ ಎಳೆದಂತಿತ್ತು.ಲೋಕಸಭೆಯಲ್ಲಿ ಈ ಘಟನೆ ನಡೆದಾಗ ಹಾಜರಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರ ಹೇಳಿಕೆಗೆ ಸದನದ ಕ್ಷಮೆಯಾಚಿಸಿದರು.ಆದರೆ ಅದರ ನಂತರ ಪಕ್ಷವು ಹಲವಾರು ವಕ್ತಾರರನ್ನು ಕಣಕ್ಕಿಳಿಸಿತು ಮತ್ತು ಅವರು ಬಿಜೆಪಿ ಸಂಸದರ ಕೈಲಿ ಹೀಗೆ ದಾಳಿಗೊಳಗಾದ ಸಂಸದರನ್ನೇ ದೂರಿದರು. ಸಹ ಸದಸ್ಯರ ವಿರುದ್ಧ ಕೋಮು ನಿಂದನೆ ಮತ್ತು ದೇವರಲ್ಲಿ ನಂಬಿಕೆಯ ಬಗ್ಗೆ ಕೆಲವು ವಿರೋಧ ಪಕ್ಷದ ಸದಸ್ಯರು ನೀಡಿದ ಹೇಳಿಕೆಗಳ ನಡುವೆ ಪೊಳ್ಳು ಸಮಾನತೆ ಹುಡುಕುವ ಪ್ರಯತ್ನಗಳಾದವು. ದುರ್ವರ್ತನೆಯ ಆರೋಪದ ಮೇಲೆ ಈ ಹಿಂದೆ ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿರುವ ಲೋಕಸಭಾ ಸ್ಪೀಕರ್ ಈ ಘಟನೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸದನವು ಯಾವುದೇ ಕೋಮು ನಿಂದನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು. ರಾಜ್ಯಸಭೆಯಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿ ಘೋಷಣೆ ಕೂಗಿದ ಬಗ್ಗೆ ಹಲವು ವಿರೋಧ ಪಕ್ಷದ ನಾಯಕರು ರಾಜ್ಯಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಈ ಘಟನೆಯೂ ಮತ್ತೆ ಮರುಕಳಿಸದಂತೆ ಸೂಕ್ತ ದಂಡನೆ ವಿಧಿಸಬೇಕು. ಹೊಸ ಸಂಸತ್ ಕಟ್ಟಡವು ಸದಸ್ಯರ ನಡುವೆ ಮತ್ತು ಸಂಸತ್ತು ಮತ್ತು ಜನರ ನಡುವೆ ಆರೋಗ್ಯಕರ ಸಂವಾದವನ್ನು ಬೆಳೆಸಬೇಕು.